ಅವಳು ದುಡ್ಡನ್ನಷ್ಟೇ ಪಡೆದುಕೊಂಡಳು. ತಕ್ಷಣ ಹೊರಟು ಹೋದಳು. ಎಲ್ಲಿಗೆ ಹೋದಳು ಗೊತ್ತಿಲ್ಲ. ಸುಮ್ಮನೆ ಹೊರಟು ಹೋದಳು. ಹೋಗುವ ಮುನ್ನ ಹಚ್ಚಿದ್ದ ಮೇಣದ ಬತ್ತಿಯನ್ನು ಉರುಬಿ ಹೋದಳು.
ಎಷ್ಟೊಂದು ಕಟ್ಟಡಗಳ ಏಷ್ಟೊಂದು ವಾಹನಗಳ ಏಷ್ಟೊಂದು ವಾಸನೆಗಳ ಈ ಊರು. ಅದೇ ಎತ್ತರೆತ್ತರದ ಮನೆಗಳಲ್ಲಿ ಅದೇ ಎತ್ತರೆತ್ತರದ ಕಿಟಕಿಗಳು. ಈ ಕಿಟಕಿಗಳ ನಿಗೂಢ ಇನ್ನೂ ಅರ್ಥವಾಗಿಲ್ಲ. ಕಚೇರಿಯ ಕಿಟಕಿಗಳು, ಕೋಣೆಯ ಕಿಟಕಿಗಳು, ಹಗಲಿನ ಕಿಟಕಿಗಳು, ರಾತ್ರಿಯ ಕಿಟಕಿಗಳು. ಅವುಗಳ ಒಳಗೇನಿದೆ. ಈ ಕಣ್ಣುಗಳಿಗೇಕೆ ಆ ಕಿಟಕಿಗಳನ್ನು ಹುಡುಕುವ ಚಟ. ಅಲ್ಲಿ ದೀಪ ಉರಿಯುತ್ತಿದೆಯಾ, ಅಲ್ಲಿ ನೆರಳು ಆಡುತ್ತಿದೆಯಾ. ಹಾಗೆ ಹುಡುಕುತ್ತಿದ್ದಾಗಲೇ ಅಲ್ಲವೆ ಅವಳು ಸಿಕ್ಕಿದ್ದು.
ಅಪ್ಪ ನೆನಪಾಗುತ್ತಿದ್ದಾನೆ. ಈಗವನು ಊರಲ್ಲಿರಬಹುದು. ಚಿಕ್ಕಪ್ಪನ ಜತೆ ಹೊಲ ಉಳುತ್ತಿರಬಹುದು. ಅಪ್ಪನಿಗೆ ತಿಂಗಳು ತಿಂಗಳು ಸಂಬಳ ಬರುತ್ತಿತ್ತು. ಆದರೂ ಊರಿಗೆ ಹೋದಾಗ ಏನಾದರೂ ನೆಪವೊಡ್ಡಿ ಹೊಲಕ್ಕೆ ಹೋಗಬೇಕು. ನೇಗಿಲು ಹಿಡಿಯಲೇಬೇಕು. ಅವಳು ಅಪ್ಪನ ವಯಸ್ಸಿನವಳು. ಅಪ್ಪನ ಊರಿನವಳು. ಹೀಗೆ ಒಂದು ಸಂಜೆ ಅವಳು ಬಂದಳು. ಅಪ್ಪ ಪಪ್ಪಾಯಿ ಕಿತ್ತುಕೊಟ್ಟ. ಅವಳು ತನ್ನ ಮಗಳ ಬಗ್ಗೆ ಹೇಳಿದಳು. ನಂತರ ದುಡ್ಡು ಏಣಿಸಿಕೊಂಡಳು. ಅಪ್ಪ ಎಷ್ತೋ ಹೊತ್ತು ನಕ್ಕ. ಮನಸಾರೆ ನಕ್ಕ.
ಅವನು ಈಗೀಗ ದೈವ ಅನ್ನುತ್ತಾನೆ. ಮಾತೆತ್ತಿದರೆ ಹಿಮಾಲಯ ಅನ್ನುತ್ತಾನೆ. ಒಬ್ಬೊಬ್ಬನೇ ಎನೇನೋ ಗೊಣಗುತ್ತಾನೆ. ಗುಟ್ಟಾಗಿ ಗಾಂಜಾ ಬೆಳೆಸುತ್ತಾನೆ ಅಂತಲೂ ಕಂಪ್ಲೇಂಟು. ಅಲ್ಲಾ ಅವಳನ್ನೇಕೆ ಇವನು ಮರೆತ?
ಆ ಅವಳು ಈಗ ಈ ಊರಲ್ಲಿ. ಈ ಅಸಂಖ್ಯ ಕಿಟಕಿಗಳ ಮಧ್ಯದಲ್ಲಿ. ಕುಕ್ಕರುಗಾಲಲ್ಲಿ ಕುಳಿತಿದ್ದಾಳೆ. ಈ ಬಾರಿ ಗಿಟಾರ್ ಕೊಂಡು ಹೋಗಿದ್ದೆ. ಉಗುರು ಕತ್ತರಿಸಿಕೊಳ್ಳುತ್ತಿದ್ದಳು. ಗಲ್ಲ ಮಂಡಿಗೆ ಆತುಕೊಂಡಿತ್ತು. ನೇಲ್ ಕಟರ್ ಅತ್ತಿಂದಿತ್ತ ಹರಿದಾಡುತ್ತಿತ್ತು. ಅವಳು ದುಡ್ಡನ್ನಷ್ಟೆ ಪಡೆದುಕೊಂಡಳು. ಗಿಟಾರನ್ನು ಕಿಟಕಿಗೆ ಅಪ್ಪಳಿಸಿದಳು.
ಇದಾಗಿ ಬಹಳ ದಿನ ನಾನು ಆ ಊರಲ್ಲಿ ಉಳಿಯಲಿಲ್ಲ.