You are currently browsing the daily archive for August 21st, 2008.

ಮೈ ತೊಳೆದು ಲಂಗ ತೊಡಿಸಿ ಕಾಡಿಗೆ ಇಡಬೇಕು
ಕಣ್ಣಾಗದಿರಲಿ
ಜರಿಲಂಗ ಒಪ್ಪುತ್ತೆ
ಮೊಗ್ಗಿನ ಜಡೆಗೆ ಸಂಪಿಗೆ ಒಳ್ಳೆ ಜೋಡಿ
ಜಡೆಬಿಲ್ಲೆ ಎಲ್ಲಿ
ಫೋಟೋಗೆ ಅಳಲ್ಲ ಅನ್ನಿಸುತ್ತೆ
ಪೌಡರು ಖಾಲಿ

ಈ ಹಾಳೆಗಳನ್ನೆಲ್ಲ ದೋಣಿ ಮಾಡಬೇಕು
ಮಳೆ ಅವಳಿಗಿಷ್ಟ

ನವಂಬರ್ ಶುರುವಾಗುತ್ತೆ
ಉಲ್ಲನ್ ಇಲ್ಲ. ಥಂಡಿ ಅವಳಿಗೆ ಆಗಲ್ಲ

ಬೀದಿಯಲ್ಲೊಬ್ಬ ಪುಟ್ಟ ಮಣ್ಣು ಹುಯ್ದುಕೊಳ್ಳುತ್ತಿದ್ದಾನೆ
ಸಂತೆಯಲ್ಲಿ ಮಕ್ಕಳ ಕದಿಯುತ್ತಾರಂತೆ

ಕಾಣದ ಮಸೀದಿ
ಹನಿಯುವ ಮೊರೆ

ಶಿವ ಶಿವೆಯರಿಗೆ ಎಚ್ಚರ
ನೆನೆದ ಖುಷಿಯಲ್ಲಿ
ಹೊರಟಿದ್ದಾರೆ ಹೊಲಕ್ಕೆ
ರೊಟ್ಟಿ ತಟ್ಟಿ

ಬರುತ್ತಾ ಅಂಗಿ ತರುತ್ತಾರಂತೆ
ರಂಜಾನ್ ಚಂದ್ರನಿಗೆ

ನಸುನಗುತ್ತಿದ್ದಾನೆ ಅಲ್ಲಾಹು

ಚಂದಮಾಮನ ಕಥೆಯಲ್ಲಿ ಸುಲಭಕ್ಕೆ ತಾರೆ ಜಾರುತ್ತಿರಲಿಲ್ಲ. ಸೂರ್ಯ ಸುಡುತ್ತಿರಲಿಲ್ಲ ಸಾಮ್ರಾಜ್ಯ ಆಳಿಯುತ್ತಿರಲಿಲ್ಲ ರಾಜ ಸಾಯುತ್ತಿರಲಿಲ್ಲ. ಅವನು ದಿವಸ ಸಾವಿರಾರು ಕಥೆಗಳಿಗೆ ಕಾವಿಟ್ಟು ಮರಿ ಮಾಡುತ್ತಿದ್ದ. ಪ್ರತಿ ಸಲ ಕಥೆ ಹೇಳುವಾಗಲೂ ಮತ್ತಷ್ಟು ಹೊಳೆಯುತ್ತಿದ್ದ. ಬೆಳದಿಂಗಳನ್ನು ಗುಟ್ಟಾಗಿ ಪ್ರೀತಿಸುತ್ತಿದ್ದ.
ಅವನಿಗೆ ಹೆಣಿಗೆ ಗೊತ್ತಿತ್ತು. ಚಂದದ ಕನಸುಗಳ ಹೆಣೆಯುತ್ತಿದ್ದ. ಹೊಲಿಗೆ ಗೊತ್ತಿತ್ತು. ಸುಂದರ ಕನಸುಗಳ ಹೊಲಿಯುತ್ತಿದ್ದ. ಪ್ರೀತಿಯ ಪೋಣಿಸಿ ಕುಚ್ಚು ಕಟ್ಟುತ್ತಿದ್ದ. ಭೂಮಿಗೂ ಹುಣ್ಣಿಮೆಯ ರುಚಿ ತೋರಿಸಿದ್ದ. ನದಿಯ ಜೊತೆ ಪಿಸುಗುಡುತ್ತಿದ್ದ, ಜಗಳವಾಡುತ್ತಿದ್ದ. ಚುಕ್ಕಿಗಳ ಗೋಲಿಯಾಡಿ ಕನಸುಗಳ ಸೋಲಿಸುತ್ತಿದ್ದ. ನಿಜಕ್ಕೂ ಅವನೊಬ್ಬ ಧೀಮಂತ ಹಾಡುಗಾರ, ಹಕ್ಕಿಗಳಿಗೆ ಹಾಡು ಕಲಿಸುತ್ತಿದ್ದ.

ಮೊನ್ನೆ ಮುಂಜಾವಲ್ಲಿ ಚಂದಮಾಮನಿಗೆ ಗುಂಡು ತಾಗಿ ಎದೆ ಹೋಳು, ಕಥೆ ಹೇಳುತ್ತಲೇ ಕುಸಿದು ಬಿದ್ದಿದ್ದ. ಜನ ಖಡ್ಗ ಝುಳಪಿಸಿದರು. ಚಂದಮಾಮನಿಗಾಗಿ ಕಂಡವರ ನೆತ್ತರು ಹರಿಸಿದರು ಮಾಂಸ ಕತ್ತರಿಸಿದರು. ಚೊಚ್ಚಿಲ ಬಸಿರಿಂದ ಭ್ರೂಣ ಇರಿದು ನೈವೇದ್ಯ ಎಂದರು. ಎದೆ ನೋವಿಗೆ ಪಾರಿವಾಳ ಮದ್ದೆಂದು ಗೂಡು ಸಹಿತ ಸುಟ್ಟು ತಿಂದರು.

ಒಂದಾನೊಂದು ಕಾಲ ಅಂತಾರಲ್ಲ ಆಗ ಚಂದಮಾಮ ಗಿಣಿಯಾಗಿದ್ದ ಕಳ್ಳನಾಗಿದ್ದ ರಾಜಕುಮಾರಿಯಾಗಿದ್ದ ಕಾಡಾಗಿದ್ದ ಜಿಂಕೆಯಾಗಿದ್ದ ಭೂತವಾಗಿದ್ದ ಗುಲಾಬಿಯಾಗಿದ್ದ ಸಪ್ತಸಾಗರವಾಗಿದ್ದ ಪಂಜರವಾಗಿದ್ದ ಮಿಂಚಾಗಿದ್ದ ನದಿ ಭೂಮಿಯ ನೇಹಕ್ಕೆ ಸೇತುವೆಯಾಗಿದ್ದ. ಸಂಜೆಯಾಗುತ್ತಲೇ ಅವನೇ ದೊಡ್ಡದೊಂದು ಕಥೆಯಾಗುತ್ತಿದ್ದ.

ಚಂದಮಾಮ ದಿನವೂ ಕರಗುತ್ತಾನೆ, ಅಳುತ್ತಾನೆ ಹಸಿವೆನ್ನುತ್ತಾನೆ ಅವನಿಗೆ ಎದೆಗಾಯ ಮಾಯುವುದು ಬೇಕಿಲ್ಲ. ಒಣ ರೊಟ್ಟಿಗೆ ಬೇಡುತ್ತಾನೆ.
ಜನಕ್ಕೆ ಚಂದಮಾಮನಿಗಿಂತಲೂ ಅವನ ಕಥೆ ಮುಖ್ಯ. ಕಥೆ ಹೇಳೆಂದು ಪೀಡಿಸುತ್ತಾರೆ,. ಚೂರಿ ತೋರಿಸಿ ಬೆದರಿಸುತ್ತಾರೆ. ಬಾವುಟ ಹಿಡಿದು ಬರುತ್ತಾರೆ. ಒಪ್ಪದ ಚಂದಮಾಮನಿಗೆ ಧಿಕ್ಕಾರ ಹೇಳುತ್ತಾರೆ. ಸರಿ ರಾತ್ರಿ ಎದ್ದು ದಂಗೆ ಹೂಡುತ್ತಾರೆ.

ಚಂದಮಾಮ ದಿಗ್ಗನೆದ್ದು ಕುಣಿದ. ಹಾವಂತೆ ಹೊರಳಾಡಿದ ಹೋರಿಯಂತೆ ಗುಟುರಿದ. ಕಥೆಗಳೆಲ್ಲ ಸೋರಿಹೋದವು. ಕೊನೆಗೆ ಜನರನ್ನೇ ಕಥೆಯಾಗಿಸಿ ಹೇಳಿದ. “ಪಾರಿವಾಳಗಳೇ ಸಾಯದಿರಿ, ಕಣ್ತೆರೆಯಿರಿ ಭ್ರೂಣಗಳೇ, ರಕ್ತ ಮಾಂಸಗಳೇ ಇಲ್ಲಿಂದ ತೊಲಗಿ” ಅಂಗಲಾಚಿದ. ಜನ ನಕ್ಕು ರಕ್ಕಸರಾಗುತ್ತಾರೆ. ಚಂದಮಾಮನ ಹಿಡಿದು ಗಲ್ಲಿಗೇರಿಸುತ್ತಾರೆ.

ಈಗ ಜನಕ್ಕೆ ಕಥೆ ಕೇಳುವ ಹುಚ್ಚು. ಹೊಸ ಚಂದ್ರನಿಗಾಗಿ ತಡಕುತ್ತಿದ್ದಾರೆ.

ಹಿಂದೆ ಬಹಳ ಹಿಂದೆ
ನನ್ನ ಚರ್ಮ ಸೂರ್ಯನ ಶಾಖಕ್ಕೆ
ನಚ್ಚಗಾಗುತ್ತಿತ್ತು

ಎಳೆತನ ಮುಗಿದಿದೆ

ನನ್ನ ಮುತ್ತಿರುವ ದಪ್ಪ ಚರ್ಮ
ಸೂರ್ಯನನ್ನು ಲೆಕ್ಕಿಸುತ್ತಿಲ್ಲ

ಚರ್ಮ ಆವಿಯಾಗಿ
ಮಂಜಾಗಿ
ಮಳೆಯಾಗಿ
ತೊಟ್ಟಿಕ್ಕಲೆಂದು ನನ್ನಿಡೀ ದೇಹವನ್ನು
ಕಡು ಕಿರಣಗಳಿಗೆ ಒಡ್ಡಿ ಕುಳಿತಿದ್ದೇನೆ

ನೆಲೆದ ಚರ್ಮ ಮಾತ್ರ
ಬಿರಿಯುತ್ತಲೇ ಇದೆ

ಚಂದ ಇತಿಹಾಸವಿದೆ
ಬೂಟುಗಳಿಗೆ
ಹಾರಿದರೆ ಪುಷ್ಪಕ ವಿಮಾನ
ನಡೆದರೆ ಪಲ್ಲಕ್ಕಿ
ಕುಣಿದರೆ ನವರಂಗ
ಧಿಮಾಕಿಗೆ ದಿವಾನಖಾನೆ

ಬೂಟುಗಳಿಗೆ ನಟನೆ ಬರುತ್ತೆ
ಮಜಾ ಎಂದರೆ ಅವು
ಕತ್ತಲ ಬಳಿದು
ಮಿರ ಮಿರ ಮಿರುಗುವುದು
ಲೇಸಿನೊಂದಿಗೆ ಸೊಕ್ಕುವುದು

ಕೆಲವು ಹೋರಾಡಿ
ಕೂಗಾಡಿ ಸುಸ್ತಾಗಿ
ಸವೆದು ಹೋಗಿವೆ
ಮತ್ತಷ್ಟು ಛತ್ರಿ ಚಾಮರ ಬಯಸಿ
ಅಟ್ಟ ಏರುತ್ತಿವೆ

ಗುಲಾಮ ಬೂಟುಗಳ ಹಾಗಲ್ಲ
ಅವನ ಗುಲಾಬಿ
ಅವನೆದುರೇ ಹೊಸಕಿ ಹೋಗುತ್ತಿದೆ
ಬೂಟುಗಳಿಗೆ ತುಳಿತ ಸಣ್ಣ ಚಟವಷ್ಟೆ

ಹೊತ್ತು ಆಕಾಶ
ಚುಕ್ಕಿ ಚಂದ್ರಮ ಹಕ್ಕಿ

ಗಾಳಿಪಟದೋಣಿಯಲ್ಲಿ
ಮುತ್ತಿನ ಜೋಳಿಗೆ ಹಿಡಿದು
ಮದರಂಗಿ ಮೈಯ್ಯ ನಾಕು ಕಾಲಿನ
ನಾಕು ಕೋಡಿನ ಅನಂತ ಸೂಫಿ
ನಡೆದಾಗ
ಸಮಾಧಿಯೇ ತೊಟ್ಟಿಲು
ಮುದಿ ಚರಿತ್ರೆ ಮತ್ತೆ ಮಗು

ಅದೆಷ್ಟು ಕನಸು ಒಳಗೊಳಗೆ
ಪುಟ್ಟ ಹಣತೆಗೆ ಕಣ್ಣಾಗುವ
ಕಣ್ಣಿಗೆ ಬೆಳಕಾಗುವ
ಬೆಳಕೇ ಸಿಡಿದು ಬೆಂಕಿಯಾಗುವ
ಅದೆಷ್ಟೋ ಕನಸು ಒಳಗೊಳಗೆ

ಬೇಕಿದೆ ಕೀರಲು ದನಿಗೊಂದು ಕೆನ್ನಾಲಿಗೆ
ಕತ್ತಲ ಮುಖಕ್ಕೆ ರಾಚಲೊಂದು ಕೊಳ್ಳಿ
ಪ್ರೀತಿಯ ಕುರುಹಾಗಿ ಒಂದು ಬೆಳಕ ಬುಟ್ಟಿ
ಅದಕ್ಕಾಗೇ ಗೀರಲೇ ಬೇಕಿದೆ.

ಸುಟ್ತು ಕರಕಾಗುವ ಹೊತ್ತಲ್ಲಿ
ಚಣವಾದರೂ ಹೊತ್ತಿ ಉರಿಯಲಿ
ನೋವ ಸುಡುವ ಹಾಡು
ಕಿಡಿಗೆ ಜೀವಕೊಡುವ ಕಾವು
ಒಳಗೆ ಒಳಗೊಳಗೆ
ಸುಮ್ಮನೆ ಸೊರಗಲಾರವು
ಚಣವಾದರೂ ಹೊತ್ತಿ ಉರಿಯಲಿ

ಕತ್ತಲು ಕತ್ತು ಹಿಸುಕುವ ಮುನ್ನ
ಕನಸು ಆರುವ ಮುನ್ನ
ಗೀರಿಬಿಡಬೇಕು
ಮುಂದೊಂದು ದಿವಸ
ಬೆಂಕಿ ಮಗಳು ಹುಟ್ಟಿ ಬಂದಾಳು
ಬೆಳಕ ಹೂವ ಬೆಳೆದು ತಂದಾಳು

ಪುಟಗಳು

ಹಗಲಿರುಳು…

August 2008
M T W T F S S
    Sep »
 123
45678910
11121314151617
18192021222324
25262728293031
Watch videos at Vodpod and other videos from this collection.

ಕಿಟಕಿಯಲ್ಲಿ...

  • 3,659 ಹಿಟ್ಸ್

Flickr Photos

Eid mubarak :)

More Photos

ಓನರ್!