You are currently browsing the category archive for the 'ಗುಂಪಿಗೆ ಸೇರದ್ದು' category.

ಚಂದಮಾಮನ ಕಥೆಯಲ್ಲಿ ಸುಲಭಕ್ಕೆ ತಾರೆ ಜಾರುತ್ತಿರಲಿಲ್ಲ. ಸೂರ್ಯ ಸುಡುತ್ತಿರಲಿಲ್ಲ ಸಾಮ್ರಾಜ್ಯ ಆಳಿಯುತ್ತಿರಲಿಲ್ಲ ರಾಜ ಸಾಯುತ್ತಿರಲಿಲ್ಲ. ಅವನು ದಿವಸ ಸಾವಿರಾರು ಕಥೆಗಳಿಗೆ ಕಾವಿಟ್ಟು ಮರಿ ಮಾಡುತ್ತಿದ್ದ. ಪ್ರತಿ ಸಲ ಕಥೆ ಹೇಳುವಾಗಲೂ ಮತ್ತಷ್ಟು ಹೊಳೆಯುತ್ತಿದ್ದ. ಬೆಳದಿಂಗಳನ್ನು ಗುಟ್ಟಾಗಿ ಪ್ರೀತಿಸುತ್ತಿದ್ದ.
ಅವನಿಗೆ ಹೆಣಿಗೆ ಗೊತ್ತಿತ್ತು. ಚಂದದ ಕನಸುಗಳ ಹೆಣೆಯುತ್ತಿದ್ದ. ಹೊಲಿಗೆ ಗೊತ್ತಿತ್ತು. ಸುಂದರ ಕನಸುಗಳ ಹೊಲಿಯುತ್ತಿದ್ದ. ಪ್ರೀತಿಯ ಪೋಣಿಸಿ ಕುಚ್ಚು ಕಟ್ಟುತ್ತಿದ್ದ. ಭೂಮಿಗೂ ಹುಣ್ಣಿಮೆಯ ರುಚಿ ತೋರಿಸಿದ್ದ. ನದಿಯ ಜೊತೆ ಪಿಸುಗುಡುತ್ತಿದ್ದ, ಜಗಳವಾಡುತ್ತಿದ್ದ. ಚುಕ್ಕಿಗಳ ಗೋಲಿಯಾಡಿ ಕನಸುಗಳ ಸೋಲಿಸುತ್ತಿದ್ದ. ನಿಜಕ್ಕೂ ಅವನೊಬ್ಬ ಧೀಮಂತ ಹಾಡುಗಾರ, ಹಕ್ಕಿಗಳಿಗೆ ಹಾಡು ಕಲಿಸುತ್ತಿದ್ದ.

ಮೊನ್ನೆ ಮುಂಜಾವಲ್ಲಿ ಚಂದಮಾಮನಿಗೆ ಗುಂಡು ತಾಗಿ ಎದೆ ಹೋಳು, ಕಥೆ ಹೇಳುತ್ತಲೇ ಕುಸಿದು ಬಿದ್ದಿದ್ದ. ಜನ ಖಡ್ಗ ಝುಳಪಿಸಿದರು. ಚಂದಮಾಮನಿಗಾಗಿ ಕಂಡವರ ನೆತ್ತರು ಹರಿಸಿದರು ಮಾಂಸ ಕತ್ತರಿಸಿದರು. ಚೊಚ್ಚಿಲ ಬಸಿರಿಂದ ಭ್ರೂಣ ಇರಿದು ನೈವೇದ್ಯ ಎಂದರು. ಎದೆ ನೋವಿಗೆ ಪಾರಿವಾಳ ಮದ್ದೆಂದು ಗೂಡು ಸಹಿತ ಸುಟ್ಟು ತಿಂದರು.

ಒಂದಾನೊಂದು ಕಾಲ ಅಂತಾರಲ್ಲ ಆಗ ಚಂದಮಾಮ ಗಿಣಿಯಾಗಿದ್ದ ಕಳ್ಳನಾಗಿದ್ದ ರಾಜಕುಮಾರಿಯಾಗಿದ್ದ ಕಾಡಾಗಿದ್ದ ಜಿಂಕೆಯಾಗಿದ್ದ ಭೂತವಾಗಿದ್ದ ಗುಲಾಬಿಯಾಗಿದ್ದ ಸಪ್ತಸಾಗರವಾಗಿದ್ದ ಪಂಜರವಾಗಿದ್ದ ಮಿಂಚಾಗಿದ್ದ ನದಿ ಭೂಮಿಯ ನೇಹಕ್ಕೆ ಸೇತುವೆಯಾಗಿದ್ದ. ಸಂಜೆಯಾಗುತ್ತಲೇ ಅವನೇ ದೊಡ್ಡದೊಂದು ಕಥೆಯಾಗುತ್ತಿದ್ದ.

ಚಂದಮಾಮ ದಿನವೂ ಕರಗುತ್ತಾನೆ, ಅಳುತ್ತಾನೆ ಹಸಿವೆನ್ನುತ್ತಾನೆ ಅವನಿಗೆ ಎದೆಗಾಯ ಮಾಯುವುದು ಬೇಕಿಲ್ಲ. ಒಣ ರೊಟ್ಟಿಗೆ ಬೇಡುತ್ತಾನೆ.
ಜನಕ್ಕೆ ಚಂದಮಾಮನಿಗಿಂತಲೂ ಅವನ ಕಥೆ ಮುಖ್ಯ. ಕಥೆ ಹೇಳೆಂದು ಪೀಡಿಸುತ್ತಾರೆ,. ಚೂರಿ ತೋರಿಸಿ ಬೆದರಿಸುತ್ತಾರೆ. ಬಾವುಟ ಹಿಡಿದು ಬರುತ್ತಾರೆ. ಒಪ್ಪದ ಚಂದಮಾಮನಿಗೆ ಧಿಕ್ಕಾರ ಹೇಳುತ್ತಾರೆ. ಸರಿ ರಾತ್ರಿ ಎದ್ದು ದಂಗೆ ಹೂಡುತ್ತಾರೆ.

ಚಂದಮಾಮ ದಿಗ್ಗನೆದ್ದು ಕುಣಿದ. ಹಾವಂತೆ ಹೊರಳಾಡಿದ ಹೋರಿಯಂತೆ ಗುಟುರಿದ. ಕಥೆಗಳೆಲ್ಲ ಸೋರಿಹೋದವು. ಕೊನೆಗೆ ಜನರನ್ನೇ ಕಥೆಯಾಗಿಸಿ ಹೇಳಿದ. “ಪಾರಿವಾಳಗಳೇ ಸಾಯದಿರಿ, ಕಣ್ತೆರೆಯಿರಿ ಭ್ರೂಣಗಳೇ, ರಕ್ತ ಮಾಂಸಗಳೇ ಇಲ್ಲಿಂದ ತೊಲಗಿ” ಅಂಗಲಾಚಿದ. ಜನ ನಕ್ಕು ರಕ್ಕಸರಾಗುತ್ತಾರೆ. ಚಂದಮಾಮನ ಹಿಡಿದು ಗಲ್ಲಿಗೇರಿಸುತ್ತಾರೆ.

ಈಗ ಜನಕ್ಕೆ ಕಥೆ ಕೇಳುವ ಹುಚ್ಚು. ಹೊಸ ಚಂದ್ರನಿಗಾಗಿ ತಡಕುತ್ತಿದ್ದಾರೆ.

ಹಿಂದೆ ಬಹಳ ಹಿಂದೆ
ನನ್ನ ಚರ್ಮ ಸೂರ್ಯನ ಶಾಖಕ್ಕೆ
ನಚ್ಚಗಾಗುತ್ತಿತ್ತು

ಎಳೆತನ ಮುಗಿದಿದೆ

ನನ್ನ ಮುತ್ತಿರುವ ದಪ್ಪ ಚರ್ಮ
ಸೂರ್ಯನನ್ನು ಲೆಕ್ಕಿಸುತ್ತಿಲ್ಲ

ಚರ್ಮ ಆವಿಯಾಗಿ
ಮಂಜಾಗಿ
ಮಳೆಯಾಗಿ
ತೊಟ್ಟಿಕ್ಕಲೆಂದು ನನ್ನಿಡೀ ದೇಹವನ್ನು
ಕಡು ಕಿರಣಗಳಿಗೆ ಒಡ್ಡಿ ಕುಳಿತಿದ್ದೇನೆ

ನೆಲೆದ ಚರ್ಮ ಮಾತ್ರ
ಬಿರಿಯುತ್ತಲೇ ಇದೆ

ಚಂದ ಇತಿಹಾಸವಿದೆ
ಬೂಟುಗಳಿಗೆ
ಹಾರಿದರೆ ಪುಷ್ಪಕ ವಿಮಾನ
ನಡೆದರೆ ಪಲ್ಲಕ್ಕಿ
ಕುಣಿದರೆ ನವರಂಗ
ಧಿಮಾಕಿಗೆ ದಿವಾನಖಾನೆ

ಬೂಟುಗಳಿಗೆ ನಟನೆ ಬರುತ್ತೆ
ಮಜಾ ಎಂದರೆ ಅವು
ಕತ್ತಲ ಬಳಿದು
ಮಿರ ಮಿರ ಮಿರುಗುವುದು
ಲೇಸಿನೊಂದಿಗೆ ಸೊಕ್ಕುವುದು

ಕೆಲವು ಹೋರಾಡಿ
ಕೂಗಾಡಿ ಸುಸ್ತಾಗಿ
ಸವೆದು ಹೋಗಿವೆ
ಮತ್ತಷ್ಟು ಛತ್ರಿ ಚಾಮರ ಬಯಸಿ
ಅಟ್ಟ ಏರುತ್ತಿವೆ

ಗುಲಾಮ ಬೂಟುಗಳ ಹಾಗಲ್ಲ
ಅವನ ಗುಲಾಬಿ
ಅವನೆದುರೇ ಹೊಸಕಿ ಹೋಗುತ್ತಿದೆ
ಬೂಟುಗಳಿಗೆ ತುಳಿತ ಸಣ್ಣ ಚಟವಷ್ಟೆ

ಗುಂಬಜುಗಣ್ಣಿನ ಪ್ರಶಾಂತ ಮಸೀದಿ
ಮಿನಾರುಗಳ ಗೊಂಚಲು
ನಲುಮೆ ನಮಾಜು

ಹಸಿದ ಒಡಲಿಗೆ ಹುರಿದ ಕಬಾಬು
ಭಗ್ನ ಶರಾಬಿಗೇ ಹೊತ್ತಿದ ಜ್ವಾಲೆ
ಸುಡುವ ಜ್ವರ

ಬಡಿವ ತಮಟೆಗಳ ನಿನಾದ
ಝೇಂಕರಿಸುವ ಧಿಕ್ಕಾರ
ಎದೆಯಿಂದ ಹೊರ ತಗೆದ ಗುಂಡು

ಸದಾ ಸರಿವ ಮೈಲಿಗಲ್ಲು
ದಿಕ್ಕೆಡಿಸುವ ಕೈಮರ
ಪುರಾನಾ ನಗರಿಯ ಕೊನೆಯಿರದ ಬೀದಿ

ಪುಟಗಳು

ಹಗಲಿರುಳು…

November 2009
M T W T F S S
« Aug    
 1
2345678
9101112131415
16171819202122
23242526272829
30  
Watch videos at Vodpod and other videos from this collection.

ಕಿಟಕಿಯಲ್ಲಿ...

  • 3,640 ಹಿಟ್ಸ್

Flickr Photos

My secret room

More Photos

ಓನರ್!