You are currently browsing the category archive for the 'ನೆನಪುಗಳು' category.
ನೆಲ, ಹಸಿರು, ಸಹಜ ಹೀಗೆ ಯಾವ ಹೆಸರಿನಿಂದ ಬೇಕಾದರೂ ಕರೆಯಿರಿ ಅವರೇ ಫುಕುವೋಕಾ. ರಸಗೊಬ್ಬರ ಕ್ರಿಮಿನಾಶಕ ಹೈಬ್ರೀಡ್ ಎಂದೆಲ್ಲ ಪ್ರಪಂಚ ಕೃತಕವಾಗುತ್ತಿರುವಾಗ ಶೂನ್ಯ ಬೇಸಾಯವನ್ನೇ ನಂಬಿ ನಡೆದವರು ಫುಕುವೋಕಾ. ಜಪಾನ್ ದೇಶದ ಈ ಅಜ್ಜ ಕನ್ನಡದ ಅಸಂಖ್ಯಾತ ಕೃಷಿಕರಿಗೆ ಗೊತ್ತು. ಅನೇಕರು ಫುಕುವೋಕಾನ ಹಾದಿಯಲ್ಲಿ ನಡೆಯುತ್ತಿದ್ದಾರೆ. ಏನನ್ನೂ ಕತ್ತರಿಸಬೇಡಿ ಏನನ್ನೂ ನಾಶ ಮಾಡಬೇಡಿ ಎಂಬ ಅವರ ಮಾತು ಕೇವಲ ವ್ಯವಸಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ಅದು ಮನುಷ್ಯ ಮನುಷ್ಯನನ್ನು ಅರ್ಥ ಮಾಡಿಕೊಳ್ಳಬೇಕಾದ ಮಾನವೀಯತೆಯ ಧ್ವನಿ. ಆಗಸ್ಟ್ ೧೮ರಂದು ಅವರು ಹೊರಟು ಹೋದರು. ಎಲ್ಲಿಗೆ ಹೊರಟು ಹೋದರು ಎಂದು ಹೇಳಲು ಮನಸ್ಸು ಭಾರವಾಗುತ್ತೆ. ಒಟ್ಟಾರೆ ಹಸಿರಾಗಿ ಹೋದರು ಅಷ್ಟೆ.
ಆ ಸಂಜೆ, ನೀಲಿ ಆಗಸ, ತಣ್ಣನೆ ಗಾಳಿ. ಜೋಕಾಲಿ ಹುಡುಗಿ. ಅಲ್ಲಿ ಕರಿಮೋಡ ಕಟ್ಟಿದ್ದು ತಿಳಿಯಲೆ ಇಲ್ಲ. ಪಟಪಟನೆ ಮಳೆ. ಅರೆಗಳಿಗೆಯಲ್ಲಿ ಅವಳು ಒದ್ದೆ. ತೋಯ್ದು ಬಂದವಳಿಗೆ ಕಾಫಿಯ ಸತ್ಕಾರ. ಹೊರಗೋ ಮಿಂಚು. ಗುಡುಗು ಧೋ ಮಳೆ. ಬೆಚ್ಚನೆ ಹೊದ್ದು ಮಲಗುತ್ತಾಳೆ. ನಿದ್ರೆ ಹತ್ತಿದ್ದು ಗೊತ್ತಾಗಲೆ ಇಲ್ಲ. ಇದ್ದಕ್ಕಿದ್ದಂತೆ ಎಚ್ಚರ ಏನೋ ಕ್ಳೆದುಕೊಂಡ ಭಾವ. ಸಾಲುಗಟ್ಟಿ ಸಾಗುತ್ತಿವೆ ಇರುವೆ. ಏನನ್ನೋ ಹೊತ್ತೊಯ್ಯುತ್ತವೆ ಅಲ್ಲಿ ಕನವರಿಕೆಗಳು ಯಾವ ಕಾಲದ ಆಹಾರಕ್ಕಾಗಿ ಮುಡಿಪೋ?
ಅದೊಂದು ಬಿಳಿ ಹೂವು. ಜಪಾನಿನಲ್ಲಿ ಮಾತ್ರ ಆರಳುವ ಬಿಳಿ ಹೂ. ಹಿರೋಶಿಮ ನಾಗಸಾಕಿ ಮೇಲೆ ಯಾವಾಗ ಅಣುಸ್ಫೋಟವಾಯಿತೋ ಆಗ ಉರಿದು ಹೋದ ಸೀದು ಹೊದ ಆ ಊರುಗಳಂತೆ ಈ ಹೂ ಕೂಡ ಭಸ್ಮವಾಯಿತಂತೆ. ಇನ್ನು ಈ ಹೂ ಅರಳುವುದೇ ಇಲ್ಲ ಎಂದು ವಿಜ್ನಾನಿಗಳು ಹೇಳಿದರಂತೆ.
ಆದರೆ ಅಣು ಬಾಂಬ್ ಸಿಡಿದ ಕೆಲವೇ ವಾರಗಳಲ್ಲಿ ಶಿರೋಯಿಹಾನಾ ಅರಳಿತು. ಜಪಾನ್ ಕೂಡ ಅರಳುತ್ತಿದೆ.
( ಆಗಸ್ಟ್ ಆರರಂದು ಬೆಂಗಳೂರಿನ ಬಾರ್ನ್ ಫ್ರೀ ಶಾಲೆಯ ಮಕ್ಕಳು ಶಿರೋಯಿಹಾನಾ ಕುರಿತ ನಾಟಕ ಆಡಿದರು.)
ಮೂರನೇ ಅಣುಬಾಂಬ್ ಮತ್ತು ಕದನ ವ್ಯಸನಿ ಅಮೆರಿಕ
ಯುದ್ಧವೆಂದರೆ ಅಮೆರಿಕ ಅಮೆರಿಕ ಎಂದರೆ ಯುದ್ಧ. ಅದರ ಕಣಕಣದಲ್ಲಿ ಯುದ್ಡದ ಅಮಲಿದೆ. ಈಗ ಅದರ ಕಣ್ಣು ಬರಪೀಡಿತ ಇರಾನ್ ಮೇಲೆ. ಸಿಡಿ ಅಣಬೆ ಸುಡದಿರಲಿ ಯಾರನ್ನೂ.

ಅದ್ಯಾಕೋ ಅವತ್ತು ಜೋರು ಗಾಳಿ. ಮೋಡವಿಲ್ಲ ಮಳೆಯಿಲ್ಲ ಆದರೂ ಗಾಳಿ ಗಾಳಿ. ಸ್ಕೂಲಿನ ಬಾಗಿಲಲ್ಲಿ ನಿಂತಿದ್ದ ಆ ಪುಟ್ಟ ಹುಡುಗಿ ಗಾಬರಿಯಾದವಳಂತೆ ಕೂಗಿದಳು. ಹೋಗಿ ನೋಡಿದರೆ ಪುಟ್ಟದೊಂದು ಗೂಡು ಮರದಿಂದ ಉದುರಿತ್ತು. ನಾಲ್ಕೈದು ಮರಿಗಳು ಒದ್ದಾಡುತ್ತಿದ್ದವು. ಒಂದನ್ನಂತೂ ಇರುವೆಗಳು ಕಚ್ಚಿ ಒಯ್ಯುತ್ತಿದ್ದವು. ಉಳಿದವನ್ನದರೂ ಉಳಿಸಿಕೊಳ್ಳುವುದು ಹೇಗೆ ಎಂದು ಅವಳಿಗೆ ಅರ್ಥವಾಗಿರಲಿಲ್ಲ. ನಾನು ಹೇಳಿದೆ ಚಿಂತೆ ಬೇಡ ಏನೂ ಆಗಲ್ಲ. ಅವಳು ನೆಮ್ಮದಿಯಾಗಿ ಹೊರಟಳು. ಹಕ್ಕಿಗಳನ್ನು ಉಳಿಸಿಕೊಳ್ಳುವ ಹೊಣೆ ನನ್ನ ಮೇಲಿತ್ತು. ಆದರೆ ಏನು ಮಾಡುವುದು ಅವುಗಳನ್ನು ಮುಟ್ಟುವಂತಿರಲಿಲ್ಲ. ಹಾಗೇನಾದರೂ ಮುಟ್ಟಿ ಅವುಗಳ ಅಮ್ಮ ಇವನ್ನು ಕರೆದುಕೊಳ್ಳದಿದ್ದರೆ? ಶಾಲೆಯ ಗಾರ್ಡು ನನ್ನ ಪೇಚಾಟ ನೋಡಿದ. ಸುಮ್ನೆ ಹೋಗ್ರಿ ಇವೆಲ್ಲ ಮಾಮೂಲು ಅಂತಾನೆ ಅಂದುಕೊಂಡೆ. ಆದರೆ ಹಕ್ಕಿಗಳನ್ನು ನೋಡಿ ಅವನಿಗೂ ಅಯ್ಯೋ ಅನ್ನಿಸಿರಬೇಕು. ನಾನು ನೋಡಿಕೊಳ್ತೇನೆ ಅಂತ ವಿಶ್ವಾಸ ತುಂಬಿದ.
ಸಂಜೆ ಮತ್ತೆ ಶಾಲೆ ಕಡೆ ಹೋದಾಗ ಗಾರ್ಡು ಅವುಗಳನ್ನು ಸೇಫಾಗಿಟ್ಟಿರುವುದಾಗಿ ಹೇಳಿದ. ಅವನು ತೋರಿಸಿದ ಕಡೆಗೆ ನೋಡಿದೆ. ಬಿದ್ದಿದ್ದ ಗೂಡನ್ನು ಬೇರೊಂದು ಮರದ ಮೇಲಿಟ್ಟಿದ್ದ. ಅಮ್ಮ ಹಕ್ಕಿ ಗೂಡಿನ ಸುತ್ತ ಗಿರಕಿ ಹೊಡೆಯುತ್ತಿತ್ತು. ಇವಳು ಬ್ಯಾಗು ನನ್ನ ಕೈಗೆ ಕೊಡುತ್ತ ಹೇಳಿದಳು ಗೂಡು ಬಿದ್ದದ್ದು ಗಾಳಿಯಿಂದ ಅಲ್ಲವಂತೆ. ಮಂಗಗಳು ಕೆಡವಿ ಹೋದವಂತೆ. ಮತ್ತೆ ನಿಂಗೊತ್ತಾ ಇವತ್ತು ಪೂರ್ಣಚಂದ್ರ ತೇಜಸ್ವಿ ಬರ್ತಡೇ.



ಹೀಗೆಂದರು…