You are currently browsing the tag archive for the 'tejaswi' tag.

ಅದ್ಯಾಕೋ ಅವತ್ತು ಜೋರು ಗಾಳಿ. ಮೋಡವಿಲ್ಲ ಮಳೆಯಿಲ್ಲ ಆದರೂ ಗಾಳಿ ಗಾಳಿ. ಸ್ಕೂಲಿನ ಬಾಗಿಲಲ್ಲಿ ನಿಂತಿದ್ದ ಆ ಪುಟ್ಟ ಹುಡುಗಿ ಗಾಬರಿಯಾದವಳಂತೆ ಕೂಗಿದಳು. ಹೋಗಿ ನೋಡಿದರೆ ಪುಟ್ಟದೊಂದು ಗೂಡು ಮರದಿಂದ ಉದುರಿತ್ತು. ನಾಲ್ಕೈದು ಮರಿಗಳು ಒದ್ದಾಡುತ್ತಿದ್ದವು. ಒಂದನ್ನಂತೂ ಇರುವೆಗಳು ಕಚ್ಚಿ ಒಯ್ಯುತ್ತಿದ್ದವು. ಉಳಿದವನ್ನದರೂ ಉಳಿಸಿಕೊಳ್ಳುವುದು ಹೇಗೆ ಎಂದು ಅವಳಿಗೆ ಅರ್ಥವಾಗಿರಲಿಲ್ಲ. ನಾನು ಹೇಳಿದೆ ಚಿಂತೆ ಬೇಡ ಏನೂ ಆಗಲ್ಲ. ಅವಳು ನೆಮ್ಮದಿಯಾಗಿ ಹೊರಟಳು. ಹಕ್ಕಿಗಳನ್ನು ಉಳಿಸಿಕೊಳ್ಳುವ ಹೊಣೆ ನನ್ನ ಮೇಲಿತ್ತು. ಆದರೆ ಏನು ಮಾಡುವುದು ಅವುಗಳನ್ನು ಮುಟ್ಟುವಂತಿರಲಿಲ್ಲ. ಹಾಗೇನಾದರೂ ಮುಟ್ಟಿ ಅವುಗಳ ಅಮ್ಮ ಇವನ್ನು ಕರೆದುಕೊಳ್ಳದಿದ್ದರೆ? ಶಾಲೆಯ ಗಾರ್ಡು ನನ್ನ ಪೇಚಾಟ ನೋಡಿದ. ಸುಮ್ನೆ ಹೋಗ್ರಿ ಇವೆಲ್ಲ ಮಾಮೂಲು ಅಂತಾನೆ ಅಂದುಕೊಂಡೆ. ಆದರೆ ಹಕ್ಕಿಗಳನ್ನು ನೋಡಿ ಅವನಿಗೂ ಅಯ್ಯೋ ಅನ್ನಿಸಿರಬೇಕು. ನಾನು ನೋಡಿಕೊಳ್ತೇನೆ ಅಂತ ವಿಶ್ವಾಸ ತುಂಬಿದ.
ಸಂಜೆ ಮತ್ತೆ ಶಾಲೆ ಕಡೆ ಹೋದಾಗ ಗಾರ್ಡು ಅವುಗಳನ್ನು ಸೇಫಾಗಿಟ್ಟಿರುವುದಾಗಿ ಹೇಳಿದ. ಅವನು ತೋರಿಸಿದ ಕಡೆಗೆ ನೋಡಿದೆ. ಬಿದ್ದಿದ್ದ ಗೂಡನ್ನು ಬೇರೊಂದು ಮರದ ಮೇಲಿಟ್ಟಿದ್ದ. ಅಮ್ಮ ಹಕ್ಕಿ ಗೂಡಿನ ಸುತ್ತ ಗಿರಕಿ ಹೊಡೆಯುತ್ತಿತ್ತು. ಇವಳು ಬ್ಯಾಗು ನನ್ನ ಕೈಗೆ ಕೊಡುತ್ತ ಹೇಳಿದಳು ಗೂಡು ಬಿದ್ದದ್ದು ಗಾಳಿಯಿಂದ ಅಲ್ಲವಂತೆ. ಮಂಗಗಳು ಕೆಡವಿ ಹೋದವಂತೆ. ಮತ್ತೆ ನಿಂಗೊತ್ತಾ ಇವತ್ತು ಪೂರ್ಣಚಂದ್ರ ತೇಜಸ್ವಿ ಬರ್ತಡೇ.


ಹೀಗೆಂದರು…