alone

published in Vijayavani

ಕನ್ನಡದ ಪ್ರಮುಖ ಪತ್ರಿಕೆಯೊಂದರ ಸಂಪಾದಕರು ಲಂಕೇಶರ ಸಂದರ್ಶನ ಪಡೆಯಲು ಹೋದರು. ಲಂಕೇಶರ ಸಿಟ್ಟು ಸೆಡವು ಅರಿತಿದ್ದ ಆ ಯುವ ಸಂಪಾದಕರಿಗೆ ಅವರನ್ನು ಮಾತನಾಡಿಸಲು ಹಿಂಜರಿಕೆ. ಲಂಕೇಶ್ ಆಗಲೇ ಹಣ್ಣಾಗಿದ್ದರು. ಅವರ ಒಂದು ಕಣ್ಣು ಕಾಣದಾಗಿತ್ತು. ಅವರ ಹುಳಿಮಾವಿನ ಮರ ಬಗ್ಗೆ ಇವರು ಬರೆದು ಇವರು ಬರೆದದ್ದರ ಮೇಲೆ ಅವರು ಬರೆದು ಎಲ್ಲವೂ ಮುಗಿದಿತ್ತು. ಅಂದು ಸಂದರ್ಶನ ಪಡೆಯಲು ಹೋದವರಿಗೆ ಲಂಕೇಶ್ ಶಾಕ್ ಕೊಟ್ಟಿದ್ದರು. ಅವರ ಕಣ್ಣಲ್ಲಿ ನೀರಿತ್ತು. ಸಾವು ಅವರನ್ನು ಕಾಡುತ್ತಿತ್ತು ಅನ್ನಿಸುತ್ತದೆ. ‘I will die like a cacroach I say’ ಅಂದರು. ಆದರೆ ಅವರು ಸತ್ತದ್ದೇ ಬೇರೆ ರೀತಿ. ಲಂಕೇಶರ ಮಿತ್ರರೊಬ್ಬರು ಹೇಳಿಕೊಂಡಂತೆ ಪರ್ವತದ ರೀತಿ.

ಚೀರೊತ್ ಅವರ ಒಂದು ಕೃತಿ

ಚೀರೊತ್ ಅವರ ಒಂದು ಕೃತಿ

ಕೇರಳದ ಮುರಳಿ ಚೀರೊತ್ ಹಳ್ಳಿಗಾಡಿನ ಬಣ್ಣದ ಹುಡುಗ. ಕೇರಳ, ಪಶ್ಚಿಮ ಬಂಗಾಳ  ಸುತ್ತಿಬಂದು ಈಗ ಬೆಂಗಳೂರನ್ನು ತಮ್ಮ ಕ್ಯಾನ್ವಾಸ್ ಮೂಲಕ ಧ್ಯಾನಿಸುತ್ತಿದ್ದಾರೆ. ಕಲಾವಿದನೊಬ್ಬ ನಗರವನ್ನು ನೋಡುವ ಪರಿ ಬೇರೆ.

ಒಂದು ದಿನ ಅವರು ಪುಟಾಣಿ ಮಗಳನ್ನು ಕರೆದುಕೊಂಡು ರಸ್ತೆಯಲ್ಲಿ ನಡೆಯುತ್ತಿದ್ದರು. ಅ ಪುಟ್ಟ ಹುಡುಗಿ ಏನನ್ನು ನೋಡಿದಳೋ ಅತ್ತ ಕೈ ಮಾಡಿದಳು. ಹಕ್ಕಿಯೊಂದನ್ನು ಆಕೆ ತೋರಿಸುತ್ತಿರಬಹುದು ಎಂದೇ ಚೀರೊತ್ ಭಾವಿಸಿದ್ದರು. ದೊಡ್ಡ ಕ್ರೇನ್ ಬಿಲ್ಡಿಂಗ್ ನೆತ್ತಿ ಮೇಲೆ ಅತ್ತಿತ್ತ ಆಡುತ್ತಿತ್ತು. ಅಂದಿನಿಂದ ಅಪ್ಪ ಮಗಳಿಗೆ ಯಾವಾಗ ನೋಡಿದರೂ ಆ ‘ಕ್ರೇನ್’ ಕೊಕ್ಕರೆಯಾಗಿ ಉಳಿದಿದೆ. ಆಗಾಗ ಚೀರೊತ್  ಮಗಳನ್ನು ಹೆಗಲ ಮೇಲೆ ಕೂರಿಸಿಕೊಂಡು ಬೆಳ್ಳಕ್ಕಿಗಳಿಗೆ ತಡಕುತ್ತಾರಂತೆ.

ಬಂಗಾರದ ಮೈಗಳೇ ಹರಿದಾಡುವ ರ್ಯಾಂಪ್ ಮೇಲೆ ಕಪ್ಪು ಆಕೃತಿಯೊಂದು ‘ನಾನೇನೂ ಕಡಿಮೆಯಲ್ಲ’ ಎಂಬಂತೆ ಹೆಜ್ಜೆಯಿರಿಸುತ್ತ ಬರುತ್ತದೆ. ಓಹ್ ಕಪ್ಪು ರೂಪದರ್ಶಿ ಎಂದು ಮೂಗುಮುರಿಯುವ ಉದ್ಘಾರ ಹೊರಡುತ್ತದೆ. ಗುಂಗುರು ಕೂದಲು, ತೀಕ್ಷ್ಣ ಕಣ್ಣುಗಳು, ದಪ್ಪ ತುಟಿ, ನೀಳ ದೇಹ ಎಂದುಕೊಳ್ಳುವ ಹೊತ್ತಿಗೇ ಆ ಆಕೃತಿ ಮರೆಯಾಗುತ್ತದೆ. ಆದರೆ ನಿಜಕ್ಕೂ ಮರೆಯಾಗುತ್ತದೆಯೇ?

ಅವರಿಟ್ಟ ಆ ಹೆಜ್ಜೆಯಲ್ಲಿ ಕೆಚ್ಚೆದೆಯ ಕುರುಹುಗಳಿವೆ, ಶೋಷಣೆಯ ಇತಿಹಾಸಕ್ಕೆ ಹೇಳಿದ ಧಿಕ್ಕಾರವಿದೆ. ಸಮಾನತೆಯ ಹಾಡು ಇದೆ. ಬೆಳಕು, ಬಣ್ಣ, ಚೆಲುವು, ಯೌವನ, ಹಣ, ಅಮಲು, ಕೀರ್ತಿ, ಸ್ವಾತಂತ್ರ್ಯ ಸ್ವೇಚ್ಛೆ ಹೀಗೆ ಕನಸನ್ನೇ ಹೊದ್ದು ನಿಂತ ಫ್ಯಾಷನ್ ಜಗತ್ತನ್ನೂ ಮೀರಿ ನಿಲ್ಲುವ ಛಲವಿದೆ. ಒಂದು ಕಾಲಕ್ಕೆ ಹೊಟ್ಟೆ ಬಟ್ಟೆಗಾಗಿ ಹೋರಾಡುತ್ತಿದ್ದ ಕಪ್ಪು ವರ್ಣೀಯರಿಗೆ ಈಗ ಉಡುಗೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ.
ಪ್ರತಿವರ್ಷ ಅಮೆರಿಕ 2000 ಕೋಟಿ ಡಾಲರ್ಗಳನ್ನು ವಸ್ತ್ರೋದ್ಯಮಕ್ಕೆ ವಿನಿಯೋಗಿಸುತ್ತದೆ. ಫ್ಯಾಷನ್ ಲೋಕಕ್ಕೆ ಭಾರತ ಬಹುದೊಡ್ಡ ಮಾರುಕಟ್ಟೆ.  ರಾಂಪ್ ಹಿಂದೆ ದುಡಿಯುವ ಸಾವಿರಾರು ತಂತ್ರಜ್ಞರಿದ್ದಾರೆ, ಶ್ರಮಿಕ ವರ್ಗವಿದೆ. ಉದ್ಯೋಗಾವಕಾಶದ ನಿರೀಕ್ಷೆಯಲ್ಲಿ ಯುವಜನಾಂಗ ಫ್ಯಾಷನ್ ಕ್ಷೇತ್ರವನ್ನು ಆಯ್ದುಕೊಳ್ಳುತ್ತಿದೆ. ಸಿನಿಮಾ ಕ್ಷೇತ್ರ ಫ್ಯಾಷನ್ ಮೇಲೆ ಅವಲಂಬಿತವಾಗುತ್ತಿದೆ. ಉಡುಪು ತಯಾರಿಕಾ ಕಂಪೆನಿಗಳು ಲಾಭಕ್ಕಾಗಿ ಮಾಡೆಲ್‌ಗಳ ಮೊರೆ ಹೋಗುತ್ತಿದ್ದಾರೆ.  ಕಾಸ್ಮೆಟಿಕ್ ಉದ್ಯಮ, ಜಾಹೀರಾತು ಕ್ಷೇತ್ರ ಹೀಗೆ ಸರ್ವವೂ ಫ್ಯಾಷನ್‌ಮಯವಾಗುತ್ತಿರುವುದು ವಾಸ್ತವ. ಫ್ಯಾಷನ್ ದೊರೆಗಳು ರೂಪಿಸಿದ ಸಣ್ಣ ವಸ್ತ್ರವೇ ಸಾವಿರಾರು ರೂಪಾಯಿ ಬೆಲೆಬಾಳುತ್ತದೆ. ಇಂಥ ಥಳುಕಿನ ಲೋಕದಲ್ಲಿ ಮಿಂಚುತ್ತಿರುವುದು ಬೆರಳೆಣಿಕೆಯ ಕಪ್ಪು ರೂಪದರ್ಶಿಗಳು. ನವೋಮಿ ಕ್ಯಾಂಪ್ಬೆಲ್, ಟೈರಾ ಬ್ಯಾಂಕ್ಸ್, ಡಾನ್ಯಲ್ ಲೂನಾ, ಸ್ಟೀವನ್ ಮೈಸೆಲ್ ಹೊರತು ಪಡಿಸಿದರೆ ಫ್ಯಾಷನ್ ಲೋಕವನ್ನು ತಣಿಸಿದ ಕೃಷ್ಣ ಸುಂದರಿಯರು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಇವರಂತೆಯೇ ಪುರುಷ ಮಾಡೆಲ್‌ಗಳು ಕೂಡ ಜನಾಂಗೀಯ ತಾರತಮ್ಯ ಎದುರಿಸುತ್ತಿದ್ದಾರೆ. ಸಮುದಾಯ ವೇದಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಇಂಗ್ಲೆಂಡ್‌ನ ಛಾಯಾಗ್ರಾಹಕ ನಿಕ್ ನೈಟ್ ಅವರ ಪ್ರಕಾರ ಜನಾಂಗೀಯ ತಾರತಮ್ಯ ಎನ್ನುವುದು ಫ್ಯಾಷನ್ ಲೋಕದಲ್ಲಿ ನಂಬಲಸಾಧ್ಯ ಎನ್ನುವಷ್ಟು ಬೆಳೆದಿದೆ. ಕಡು ಬಣ್ಣದ ಮಾಡೆಲ್ಗಳನ್ನು ತಿರಸ್ಕರಿಸಿದ ಬಗ್ಗೆ ಫ್ಯಾಷನ್ ಗುರುಗಳಾರೂ ಜೋರಾಗಿ ಮಾತನಾಡುವುದಿಲ್ಲ. ಆದರೆ ಬಹುತೇಕರು ಅವರ ಬಗ್ಗೆ ಜಾಣ ಕುರುಡು ಪ್ರದರ್ಶಿಸುತ್ತಾರೆ. ಕಪ್ಪು ವರ್ಣೀಯರಿಗೆ ಬೆಲೆಯಿಲ್ಲ ಎನ್ನುತ್ತದೆ ಜಾಹೀರಾತು ಉದ್ಯಮ.
ಕಪ್ಪು ಜನಾಂಗದ ಜತೆಗೇ ಏಷ್ಯಾ ಮಾಡೆಲ್ಗಳು ಕೂಡ ಫ್ಯಾಷನ್ ಒಡೆಯರಿಂದ ಅವಜ್ಞೆಗೆ ಒಳಗಾಗಿದ್ದಾರೆ. ಪಾಕಿಸ್ತಾನ ಭಾರತದಂಥ ಸಂಪ್ರದಾಯ ಪ್ರಧಾನ ರಾಷ್ಟ್ರಗಳಿಂದ ಮಾಡೆಲ್ಗಳನ್ನು ಹೆಕ್ಕಿ ತರುವುದು ಕಷ್ಟದ ಕೆಲಸ ಎಂದು ಕೆಲವರು ಕೈ ಚೆಲ್ಲುತ್ತಾರೆ. ಆದರೆ ಹೊಸ ಮಾಡೆಲ್‌ಗಳನ್ನು ಹೆಕ್ಕಿ ತರುವುದಿರಲಿ ಈಗಿರುವ ರೂಪದರ್ಶಿಗಳನ್ನು ಏಕೆ ಬಳಸಿಕೊಳ್ಳುತ್ತಿಲ್ಲ ಎಂಬ ಪ್ರಶ್ನೆಗೆ ಯಾರ ಬಳಿಯೂ ಉತ್ತರ ದೊರೆಯುವುದಿಲ್ಲ.
1988ರ ವೋಗ್ ಮುಖಪುಟದಲ್ಲಿ ರಾರಾಜಿಸಿ ಫ್ಯಾಷನ್ ದೊರೆಗಳ ಹುಬ್ಬೇರುವಂತೆ ಮಾಡಿದ್ದ ನವೋಮಿ ” ಹಲವು ಬಣ್ಣಗಳಿಂದ ಪ್ರಪಂಚ ಸುಂದರವಾಗಿ ರೂಪುಗೊಂಡಿದೆ. ಆದರೆ ಬಿಳಿ ಜನಾಂಗವನ್ನು ಹೊರತುಪಡಿಸಿ ಬಹುತೇಕ ಎಲ್ಲ ಮಾಡೆಲ್‌ಗಳನ್ನು ಫ್ಯಾಷನ್ ನಿರಾಕರಿಸಿದೆ” ಎಂದು ಇತ್ತೀಚೆಗೆ ಗುಡುಗಿದ್ದರು.  ಲಾಭ ಗಳಿಸುವ ಒಂದೇ ಉದ್ದೇಶದಿಂದ ಬಹುದೊಡ್ಡ ಸಮುದಾಯವನ್ನು ಕಡೆಗಣಿಸುವುದು ಸರಿಯಲ್ಲ ಎಂದು ಖ್ಯಾತ ಮಾಡೆಲ್ ನಿಕ್‌ನೈಟ್ ಅಸಮಾಧಾನ ವ್ಯಕ್ತಪಡಿಸಿದ್ದರು.
1970ರ ದಶಕದಲ್ಲಿ ಪ್ಯಾರಿಸ್ ಹೊಸ ಚಿಂತನೆಗಳಿಗೆ ತೆರೆದುಕೊಳ್ಳುತ್ತಿತ್ತು. ಕಪ್ಪು ಮಾಡೆಲ್ಗಳನ್ನು ಹೊಂದಿರುವುದು ಫ್ಯಾಷನ್ ಸಂಘಟಕರಿಗೆ ಹೆಮ್ಮೆಯ ಸಂಗತಿಯಾಗಿತ್ತು. ‘ಕಪ್ಪು ರೂಪದರ್ಶಿಯರ ಪ್ರವೇಶದಿಂದಾಗಿ ರಾಂಪ್ ಮೇಲೆ ಬಹುಸಂಸ್ಕೃತಿಯನ್ನು ಬಿಂಬಿಸಲು ಸಾಧ್ಯವಾಯಿತು’ ಎಂದು ಕ್ರಿಯೇಟಿವ್ ಡೈರೆಕ್ಟರ್ ಸೇಂಟ್ ಲಾರೆನ್ಸ್ ಆ ದಿನಗಳನ್ನು ನೆನೆಯುತ್ತಾರೆ.
ಈಗ ಮಾಡೆಲ್ಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯೇ ವಿಚಿತ್ರವಾಗಿರುತ್ತದೆ. ನೀವು ಮಾಡೆಲ್ ಆಗಿದ್ದರೆ ನಿಮ್ಮ ಪೋರ್ಟ್ ಫೋಲೊಯೊದಲ್ಲಿ ನೀವು ಕಕೇಷಿಯನ್/ ಕಕೇಷಿಯನೇತರರೇ ಎಂಬುದನ್ನು ನಮೂದಿಬೇಕು. ಇನ್ನೊಂದೆಡೆ ಆಯ್ಕೆ ಪ್ರಕ್ರಿಯೆಗೆ ಮುನ್ನವೇ ಕೆಲವು ಜಾಹೀರಾತು ಏಜೆನ್ಸಿಗಳು ಬ್ಲಾಕ್ ಮಾಡೆಲ್‌ಗಳು ಅಗತ್ಯವಿಲ್ಲ ಎಂದು ಸಾರಿರುತ್ತಾರೆ. ಆರ್ಥಿಕ ಮುಗ್ಗಟ್ಟಿನ ಸಮಯದಲ್ಲೂ ‘ಕಡಿಮೆ ಬೆಲೆಗೆ’ ದೊರೆಯುತ್ತಿದ್ದ ಕಪ್ಪು ವರ್ಣೀಯ ಮಾಡೆಲ್‌ಗಳನ್ನು ಫ್ಯಾಷನ್ ಉದ್ಯಮ ದುಡಿಸಿಕೊಳ್ಳಲಿಲ್ಲ. ಇವರನ್ನು ‘ಜನಾಂಗೀಯ ಅಲ್ಪಸಂಖ್ಯಾತ ರೂಪದರ್ಶಿಗಳು’ಎಂದೇ ಫ್ಯಾಷನ್ ಲೋಕ ವರ್ಗೀಕರಿಸಿದೆ. ಅಂದಹಾಗೆ ಅವಕಾಶ ಕಳೆದುಕೊಳ್ಳುವ ಭೀತಿಯಿಂದ ಈ ಜನಾಂಗೀಯ ಅಲ್ಪಸಂಖ್ಯಾತರು ಕೂಡ ಚಕಾರ ಎತ್ತುವುದಿಲ್ಲ. ಬೆಳಕಿನ ಬುಡದಲ್ಲೇ ಕತ್ತಲಿದೆ ಎಂದಾಯಿತಲ್ಲವೆ?

 

ಕನ್ನಡ ಚಿತ್ರರಂಗ ಸೇರಿದಂತೆ ಭಾರತೀಯ ಸಿನಿಮಾ ಕುಸಿಯುತ್ತಿದ್ದರೆ ನಟರು ನಿರ್ದೇಶಕರತ್ತ ನಿರ್ದೇಶಕರು ನಿರ್ಮಾಪಕರತ್ತ, ನಿರ್ಮಾಪಕರು ಪ್ರೇಕ್ಷಕರತ್ತ ಬೊಟ್ಟು ಮಾಡಿ ಕೈ ತೊಳೆದುಕೊಳ್ಳುತ್ತ್ತಾರೆ. ಸಿನಿಮಾ ಎಂಬುದು ಒಂದು ತಪಸ್ಸಿನಂತಾಗದೆ ಕೈಗಾರಿಕೆಯಂತೆ ಯಾಂತ್ರಿಕವಾಗಿರುವುದು ಅದರ ಪ್ರಮುಖ ವೈಫಲ್ಯತೆ. ಈ ಕೈಗಾರಿಕೆಯ ಉತ್ಪನ್ನವೇ ಆಗಿರುವ ಬಹುತೇಕ ಹಿರಿಕಿರಿಯ ನಟರು ಕೂಡ ಯಾಂತ್ರಿಕವಾಗಿಯೇ ಯೋಚಿಸುತ್ತಾರೆ ಅನ್ನಿಸುತ್ತದೆ.

ಒಬ್ಬ ನಟ ನಾಯಕನ ಪಟ್ಟಕ್ಕೇರಿದ ಕೂಡಲೇ ಆತನೊಳಗೆ ಭ್ರಮೆಯೊಂದು ಬೇರೂರುತ್ತದೆ. ತಾನೊಬ್ಬ ನಾಯಕ ನಟ ಆ ಪಟ್ಟ ಎಂದೆಂದಿಗೂ ತ್ಯಜಿಸಬಾರದು ಎಂದು. ಹೀರೋ ಎಂಬ ಪದವನ್ನು ಚಿತ್ರರಂಗ ಅದು ಹೇಗೆ ಅರ್ಥ ಮಾಡಿಕೊಂಡಿದೆಯೋ ಗೊತ್ತಿಲ್ಲ. ಒಬ್ಬ ನಟ ಹೀರೋ ಆಗಿಬಿಟ್ಟನೆಂದರೆ ಆತ ಹಣ್ಣು ಹಣ್ಣು ಮುದುಕನಾದರೂ ಫೈಟ್ ಮಾಡುತ್ತಾ, ನಾಯಕಿಯರೊಂದಿಗೆ ಮರ ಸುತ್ತುತ್ತಲೇ ಇರಬೇಕೆಂಬ ರೂಢಿ ಚಿತ್ರೋದ್ಯಮದಕ್ಕೆ ಮೊದಲಿನಿಂದಲೂ ಅಂಟಿಕೊಂಡು ಬಂದಿರುವ ಶಾಪ. ನಾಯಕನಟರಿಗೂ ಅಷ್ಟೆ ಸಿನಿಮಾದಲ್ಲಿ ಹೀರೋ ಆಗಿ ನಟಿಸಿ ಬಿಡುವ ಚಪಲ. ವಯಸ್ಸಾದ ಕಾರಣಕ್ಕೆ ಹಿರಿಯರೂ ಆಗಿ ಹೋಗಿರುವ ನಟರನ್ನು ಎದುರುಹಾಕಿಕೊಳ್ಳುವ ಗೋಜಿಗೂ ಹೊಸ ಪೀಳಿಗೆ ಹೋಗುವುದಿಲ್ಲ. ಚಿತ್ರರಂಗ ಏನಾದರೂ ಯಶಸ್ಸಿನ ಹಾದಿಯಲ್ಲಿ ತಪ್ಪು ಹೆಜ್ಜೆಗಳನ್ನಿಡುತ್ತಿದ್ದರೆ ಅದಕ್ಕೆ ಬಹು ಮುಖ್ಯ ಕಾರಣ ಈ ನಾಯಕ ಭ್ರಮೆಯ ನಟರು.

ಇಷ್ಟೆಲ್ಲ ಹೇಳಲು ಪ್ರೇರೇಪಿಸುವಂತೆ ಮಾಡಿರುವುದು ಬಿಡುಗಡೆಗೆ ಸಜ್ಜಾಗಿರುವ ಬಾಲಿವುಡ್ ಚಿತ್ರ ’ಪಾ’. ಚಿತ್ರದಲ್ಲಿ ಅಮಿತಾಭ್ ರೋಗಗ್ರಸ್ತ ಮಗುವಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಟನೊಬ್ಬ ಭ್ರಮೆಗಳನ್ನು ಮರೆತಾಗ ಮಾತ್ರ ಇಂಥ ಮಹಾನ್ ಸಾಧನೆ ಸಾಧ್ಯ. ಅದನ್ನು ಮರೆತಿದ್ದಕ್ಕೇ ಚಾರ್ಲಿ ಚಾಪ್ಲಿನ್ ಜನರ ಮನಸ್ಸಿನಲ್ಲಿ ಅಚ್ಚ ಹಸುರಾಗಿ ಉಳಿದಿದ್ದು. ಒಂದು ಘಟ್ಟದವರೆಗೆ ಇಮೇಜ್ ಅನ್ನುವುದು ಮುಖ್ಯ. ಆಮೇಲೇನಿದ್ದರೂ ಇಮೇಜ್‌ಗಳನ್ನು ರೂಪಿಸಬೇಕು ಎಂಬುದು ನಾಯಕ ನಟರಿಗೆ ಅದೇಕೆ ಅರ್ಥವಾಗುವುದಿಲ್ಲ?
ಪ್ರಕಾಶ್ ರೈರಂಥ ಮಹಾನಟ ಇಮೇಜ್‌ಗೆ ಅಂಟಿ ಕುಳಿತಿದ್ದರೆ ಕಾಂಚಿವರಂನಂಥ ಶ್ರೇಷ್ಟ ಕಲಾಕೃತಿಯೊಂದು ಮೂಡಿ ಬರಲು ಸಾಧ್ಯವಿತ್ತೇ? ಹಾಗೆ ನೋಡಿದರೆ ಪ್ರಕಾಶ್ ರೈ ತಮ್ಮ ಪಾತ್ರಗಳ ಮೂಲಕ ಚಿತ್ರರಂಗದ ಗ್ರಾಮರ್‌ಗೆ ಪ್ರಶ್ನೆಗಳನ್ನು ಎಸೆಯುತ್ತಾರೆ. ಈ ಮೂಲಕ ಜನಮನದಲ್ಲಿ ಹಸಿರಾಗಿ ಉಳಿಯುತ್ತಾರೆ. ತೆಲುಗಿನಲ್ಲಿ ‘ಕೊತ್ತ ಬಂಗಾರು ಲೋಕಂ’ ಎಂಬ ಚಿತ್ರ ಬಿಡುಗಡೆಯಾಯಿತು. ನವಿರಾದ ಪ್ರೇಮದ ಸುತ್ತ ಚಿತ್ರ ಹೆಣೆದಿದ್ದರೂ ಥಿಯೇಟರ್‌ನಿಂದ ಹೊರಬಂದಾಗ ಮನಸ್ಸಿನಲ್ಲಿ ಅಚ್ಚೊತ್ತುವುದು ಪೋಷಕ ನಟನಾಗಿದ್ದ ಪ್ರಕಾಶ್ ರೈ ಪಾತ್ರ. ಅದು ನಟನೊಬ್ಬನ ನಿಜವಾದ ಯಶಸ್ಸು.
ಒಂದು ಹಂತಕ್ಕೆ ಬಂದಾಗ ನಾಯಕ ನಟರು ಕಲಿಕೆಯನ್ನು ಮರೆತು ಬಿಡುತ್ತಾರೆ ಅನ್ನಿಸುತ್ತದೆ. ಇಂದಿನ ಪ್ರೇಕ್ಷಕರು ಏನನ್ನು ಬಯಸುತ್ತಾರೆ ಎಂಬುದು ಅವರಿಗೆ ಅರ್ಥವೇ ಆಗುವುದಿಲ್ಲ. ಮುಖ್ಯಮಂತ್ರಿ ಅಭ್ಯರ್ಥಿ  ತನ್ನ ಸ್ವಕ್ಷೇತ್ರದಲ್ಲಿ ಠೇವಣಿ ಕಳೆದುಕೊಳ್ಳುತ್ತಾನಲ್ಲಾ ಅಂಥ ಸ್ಥಿತಿ ಈ ವರ್ಗದ ನಟರದ್ದು.
ಉದಯೋನ್ಮುಖ ಪೋಷಕ ನಟರೊಬ್ಬರು ಚಿತ್ರವೊಂದರಲ್ಲಿ ನಟಿಸಿದ್ದರು. ಅವರನ್ನು ಭೇಟಿಯಾದ ಕಾಲೇಜು ಹುಡುಗನೊಬ್ಬ ನೀವು ನಟಿಸುತ್ತಿರುವ ಚಿತ್ರದಲ್ಲಿ ಹೀರೋ ಯಾರು ಎಂದು ಕೇಳಿದ.
ಆ ನಟ ‘ಮೂರು ಮಂದಿ’ ಎಂದು ಉತ್ತರಿಸಿದರು. ಹುಡುಗ ತಕ್ಷಣ ತನ್ನ ಮನಸ್ಸನಲ್ಲಿ ಮಾಹಾನುಭಾವ ನಟರನ್ನೆಲ್ಲ ಕಲ್ಪಿಸಿಕೊಂಡು ‘ಯಾರು ಯಾರು ಅವರು?’ ಎಂದ.
ಆ ಕಥೆಯಲ್ಲಿದ್ದ ಅಜ್ಜಿ ಮತ್ತು ಮುದುಕಿ ಹಾಗೂ ಅವರ ಮನೆಯ ಕೆಲಸಗಾರನ ಚಿತ್ರಣವನ್ನು ಕಣ್ಣ ಮುಂದೆ ತಂದರು. ಹೀರೋಯಿಸಂ ಬಗ್ಗೆ ಹುಡುಗನಲ್ಲಿದ್ದ ಕಲ್ಪನೆಗಳು ಬದಲಾದವು.
ಎಷ್ಟು ದಿನ ಒಬ್ಬನೇ ನಟನನ್ನು ನಾಯಕನನ್ನಾಗಿ ತೋರಿಸಲು ಸಾಧ್ಯ? ಆ ನಾಯಕ ನಟ ಎಷ್ಟು ದಿನ ತಾನೇ ಯುವಕನಾಗಿ ಉಳಿಯಲು ಸಾಧ್ಯ? ಇದರಿಂದ ಹಿರಿಯ ನಟರೆನಸಿಕೊಂಡವರು ಹೊಸಬರಿಗೆ ಬೋಧಿಸುವುದಾದರೂ ಏನನ್ನು?

ಭ್ರಮೆಗಳಲ್ಲಿ ಬದುಕುತ್ತಿರುವ ನಾಯಕ ನಟರೇ ಮೊದಲು ‘ಪಾ’ ಚಿತ್ರ ನೋಡಿ.

‘ಸ್ವಾಮಿ ಇದೊಂದು ತಿಳಿ ನೀರಿನ ಬುಗ್ಗೆ ಎನ್ನುತ್ತೀರಿ ನೀವು’
‘ಹೌದು’jnaana%20neeru
‘ಆದರೆ ನೀರೆಲ್ಲ ಬಗ್ಗಡ?’
‘ಸರಿಯಾಗಿ ನೋಡು ಅದು ತಿಳಿನೀರು’
‘ಇಲ್ಲ ಬಗ್ಗಡ’
‘ಇಲ್ಲ ತಿಳಿ’
 ಚರ್ಚೆ ಗಂಟೆಗಳವರೆಗೆ ನಡೆಯಿತು. ಜನ ಸೇರಿದರು. ನೀರು ಕದಡಿದೆ ಎಂದೇ ವಾದಿಸಿದರು.

 ಗುರು ಮಾತ್ರ ಹಠ ಬಿಡದೆ ‘ಈಗ ನೋಡಿ’ ಎಂದರು. ನೀರು ತಿಳಿಯಾಗತೊಡಗಿತ್ತು.

444
ಕಣ್ಣು ಗುರಿಯನ್ನೇ ನೋಡುತ್ತಿತ್ತು. ಬಾಣ ಹೆದೆ ಏರಿತ್ತು. ಎದುರಿಗೇ ಹೆಬ್ಬುಲಿಯೊಂದು ನೀರು ಕುಡಿಯುತ್ತಿತ್ತು. ಅದರ ಬಲಿಷ್ಟ ದೇಹ, ಕಪ್ಪು ಹಳದಿಯ ಪಟ್ಟೆಗಳು… ಅದೆಷ್ಟೋ ದಿನಗಳಿಂದ ಕಾಯುತ್ತಿದ್ದ ಭರ್ಜರಿ ಬೇಟೆ ಇದು. ಅದು ಕಣ್ಣು ಮುಚ್ಚಿ ಬಿಟ್ಟಾಗ ಇವನ ಕಣ್ಣು ಹೊಳೆಯುತ್ತಿತ್ತು. ಇನ್ನು ಹೆಚ್ಚು ತಡ ಮಾಡುವಂತಿಲ್ಲ. ವಯಸ್ಸಿನ ಹುಲಿ. ಇದ್ದಕ್ಕಿದ್ದಂತೆ ಅದರ ಉಗುರು ಹಲ್ಲು ಇವನ ಗಮನ ಸೆಳೆಯಿತು. ತನ್ನ ಮುಂದಿದ್ದ ಬಾಣವನ್ನು ಈಗ ಆತ ನೋಡಿದ. ಹುಲಿಯ ಉಗುರಿಗಿಂತ ಅವನ ಬಾಣ ಚೂಪೆನಿಸಿತು.
ಮತ್ತೆಂದೂ ಆತ ಬೇಟೆಯಾಡಲಿಲ್ಲ ಎಂಬುದು ಊರಲ್ಲಿ ಸುದ್ದಿ.

a511ಅವನು ಇಳಿಯುತ್ತಲೇ ಹೋದ.
ಆಳ ಮೆಟ್ಟಿಲು. ಬೇರು. ಹಕ್ಕಿಯಿಲ್ಲದ ಗೂಡು.
ಅವನು ಇಳಿಯುತ್ತಲೇ ಹೋದ.
ಮಣ್ಣು. ಚೀರುವ ಬಾವಲಿ, ಮಂದ ಬೆಳಕು.
ಅವನು ಇಳಿಯುತ್ತಲೇ ಹೋದ.
ಇಲಿ ನುಂಗುತ್ತಿರುವ ಸರ್ಪ. ಹಸಿರು ಪಾಚಿ
ಅವನು ಇಳಿಯುತ್ತಲೆ ಹೋದ
ಅರೆ ಆಕಾಶ. ಕದಡಿದ.

a4
ಅದು ಬುದ್ಧನ ಊರು. ಆ ಊರಿನವರೂ ಬುದ್ಧನಂತವರೇ. ಉದ್ದ ಕಿವಿ, ಗುಂಗುರು ಕೂದಲು, ಅರೆ ತೆರೆದ ಕಣ್ಣುಗಳು, ತೆಳ್ಳನೆ ನಗೆ.
ಕೃಶ ದೇಹದವನೊಬ್ಬ ಬಂದ.
ಆಸೆಯೇ ದುಃಖಕ್ಕೆ ಮೂಲ ಎಂದ.
ಬುದ್ದನಂತವರು ಮುಖವಾಡ ಕಳಚಿಟ್ಟರು.
ನಗಲು ಯತ್ನಿಸಿದರು.

 

 

dscn02171

dscn0227

dscn01562

dscn0205

dscn01812

ಪುಟಗಳು

ಹಗಲಿರುಳು…

ಜೂನ್ 2023
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 1234
567891011
12131415161718
19202122232425
2627282930  

ಕಿಟಕಿಯಲ್ಲಿ...

  • 5,709 ಹಿಟ್ಸ್

ಪಾಪುಲರ್ ಪೋಸ್ಟು

Flickr Photos

ಓನರ್!